ಅಂಕಣ ಸಂಗಾತಿ

ಸುಜಾತಾ ರವೀಶ್

ಎಲ್ಲಾ ಮಿತ್ರೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು . ಇತ್ತೀಚೆಗೆ ಓದಿದ ನನ್ನ ಮನಸ್ಸನ್ನು ದಟ್ಟವಾಗಿ ಆವರಿಸಿಕೊಂಡ ಪುಸ್ತಕ “ವಸುಧೆ” ಪ್ರಬಂಧ ಮಂಜರಿ. ಲೇಖಕಿ ಶ್ರೀಮತಿ ವಿಜಯಾ ಶಂಕರ್ ಅವರು ಸಂಪಾದಿಸಿರುವ ಈ ಗ್ರಂಥದಲ್ಲಿ ಒಟ್ಟು ನಲವತ್ತು ವಿಚಾರ ವೈಚಾರಿಕ ಲೇಖನಗಳಿದ್ದು ಇವೆಲ್ಲವನ್ನು ಬರೆದಿರುವುದು ಈಗಾಗಲೇ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡು ಗಟ್ಟಿಯಾಗಿ ನೆಲೆ ನಿಂತಿರುವ ದಿಟ್ಟ ಲೇಖಕಿಯರು ಎಂಬುದು ಗಮನಾರ್ಹ .
ಗೀತಾಂಜಲಿ ಪಬ್ಲಿಕೇಷನ್ಸ್ ಅವರಿಂದ ಪ್ರಕಟವಾದ ಈ ಪುಸ್ತಕದ ಪ್ರಥಮ ಮುದ್ರಣವಾಗಿರುವುದು
೨೦೧೪ರಲ್ಲಿ.

ಈ ಲೇಖನಗಳ ಗುಚ್ಚವನ್ನು ಪ್ರತಿಭೆ ಮತ್ತು ವ್ಯುತ್ಪತ್ತಿಗಳ ಅಪರೂಪದ ಸಂಗಮವಾಗಿರುವ ನಾಡೋಜ ಡಾಕ್ಟರ್ ಕಮಲಾ ಹಂಪನಾ ಅವರಿಗೆ ಗೌರವಪೂರ್ವಕವಾಗಿ ಸಮರ್ಪಣೆ ಮಾಡಿರುವುದೂ ವಿಶಿಷ್ಟ . ಮುನ್ನುಡಿಯಲ್ಲಿ ಹೇಳಿರುವಂತೆ “ಪ್ರಸ್ತುತ ಕೃತಿ ಕೇವಲ ನಡೆದುಬಂದ ದಾರಿಯ ಆಯಾಸ ಪ್ರಯಾಸಗಳ ಬೆಳಕಿಂಡಿಯ ಮೂಲಕ ಹೊಸ ಹೊಸ ಮಾರ್ಗಗಳ ಅನ್ವೇಷಣೆಗೆ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಆತ್ಮದ ಅನಾವರಣದ ಸಾಧ್ಯತೆಯನ್ನು ತೋರಿಸಿಕೊಡುವ ಬಹುರೂಪಿ ಬರಹಗಳ ಸಂಕಲನ . “

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಮಹಿಳಾ ಅಧ್ಯಯನ ಪೀಠ ಆರಂಭವಾಗಿ ಒಂದು ವರ್ಷದ ಖುಷಿಯ ಸಂಭ್ರಮದೊಂದಿಗೆ ಈ ಪುಸ್ತಕದ ಓದು ಮಹತ್ವವನ್ನು ಪಡೆದುಕೊಳ್ಳುತ್ತದೆ . ಇಲ್ಲಿನ ಮಹಿಳಾ ವಿಷಯಗಳ ಬಗ್ಗೆ ಮಹಿಳೆಯರ ಅಧ್ಯಯನ , ವನಿತೆಯರ ನಾನಾ ವಿಷಯಗಳ ಆಯಾಮದ ಬಗ್ಗೆ ವಸ್ತುನಿಷ್ಠ ಅಭಿಪ್ರಾಯಗಳನ್ನು ಕೊಡುವುದಲ್ಲದೆ ಬೇರೆಯದೇ ಆಯಾಮಗಳ ಹೊಳಹುಗಳ ಸಾಧ್ಯತೆಯ ಬಗ್ಗೆಯೂ ಬೆಳಕು
ಚೆಲ್ಲುವುದರಿಂದ ಪುಸ್ತಕದ ಓದು ಗಂಭೀರ ಚಿಂತನೆಗೆ ಎಡೆಗೊಡುವ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಯೋಚಿಸುವ ಎಲ್ಲಾ ಮಾನವತಾವಾದಿಗಳಿಗೆ ಓದಲೇ ಬೇಕು ಎನ್ನುವ ಪಟ್ಟಿಗೆ ಸೇರುವ ಪುಸ್ತಕ .

ಇಲ್ಲಿನ ವಿಷಯಗಳ ಹರಿವೂ ವಿಶಾಲ ವಿಸ್ತೃತ ಹಾಗೆಯೇ ಗಹನ ಆಳವೂ ಹೌದು . ಪ್ರತ್ಯೇಕವಾಗಿ ಯಾವೊಂದು ಪ್ರಬಂಧಗಳ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ ಏಕೆಂದರೆ ಪ್ರತಿಯೊಂದು ನಾವೇ ಓದುತ್ತಾ ಅದರ ಅಂತರಾಳಕ್ಕೆ ಇಳಿಯುತ್ತಾ ಯೋಚನೆಗಳ ಚಿಂತನ ಮಂಥನವನ್ನು ಮಾಡಲೇ ಬೇಕಾದಂಥವು. ಇಲ್ಲಿ ನನ್ನ ಅಭಿಪ್ರಾಯವಾಗಲೀ ಚಿತ್ರಣವಾಗಲೀ ಅಂತಹ ಅವಶ್ಯಕವಲ್ಲ ಎನ್ನುವುದು ನನ್ನ ಅನಿಸಿಕೆ .

ಪ್ರಾಚೀನ ಕಾಲದಲ್ಲಿ ಸ್ತ್ರೀಯರ ಸ್ಥಾನಮಾನ,
ಮಹಿಳೆಯರಿಲ್ಲದ ಚರಿತ್ರೆ, ಮಹಿಳಾ ಅಧ್ಯಯನದ ಇತಿಮಿತಿಗಳು, ಮಹಿಳೆ ಮತ್ತು ಧಾರ್ಮಿಕ ದೃಷ್ಟಿ, ಭಾರತದಲ್ಲಿ ಮಹಿಳಾ ಅಧ್ಯಯನದ ಹುಟ್ಟು ಬೆಳವಣಿಗೆ, ಬದುಕಿಗಾಗಿ ಮಹಿಳೆಯರ ಹೋರಾಟ, ಜಾಗತೀಕರಣ ಮತ್ತು ಮಹಿಳಾ ಅಸ್ತಿತ್ವದ ಪ್ರಶ್ನೆ ಇವೆಲ್ಲ ಪ್ರಪಂಚ ಮತ್ತು ಮಹಿಳೆಯರ ನಡುವಿನ ಸಂಬಂಧವನ್ನು ಹೇಳುತ್ತಲೇ ಸ್ತ್ರೀಯರ ಸ್ಥಾನಮಾನಗಳ ಹಿಂದಿನ ಸ್ಥಿತಿ, ಇಂದಿನ ಸ್ಥಿತಿ ಹಾಗೂ ಮುಂದೆ ತಲುಪಬಹುದಾದಂತಹ ತಲುಪಬೇಕಾದ ಗಮ್ಯ ಗಳ ಬಗ್ಗೆ ಪ್ರಶ್ನೆ ಎತ್ತುತ್ತವೆ. ಗಂಭೀರ ಚಿಂತನೆಗೆ ತೊಡಗಿಸುತ್ತದೆ .ಅಂತೆಯೇ ಅವಿವಾಹಿತೆಯರ ತಲ್ಲಣಗಳು, ಅಂತರ್ಜಾತಿಯ ವಿವಾಹ ಮತ್ತು ಸಮಾಜ ದೃಷ್ಟಿ, ಅತ್ಯಾಚಾರ ಒಂದು ನೋಟ, ಕಾಣೆಯಾಗುತ್ತಿರುವ ಹೆಣ್ಣು ಭ್ರೂಣದ ಹಿಂದೆ, ಮಹಿಳೆ ಮತ್ತು ಕಾವ್ಯಾಭಿವ್ಯಕ್ತಿ, ತಾಯಿ ಮಗಳು ಮೊಮ್ಮಗಳು ಅಭಿರುಚಿಯ ಚೌಕಟ್ಟುಗಳು, ಈ ಎಲ್ಲಾ ಲೇಖನಗಳು ಸೂಕ್ತ ವಿವರಗಳೊಡನೆ ಯೋಚನೆಗೆ ಗ್ರಾಸವನ್ನು ಒದಗಿಸುತ್ತವೆ . ಈಗಲೂ ದೂರದರ್ಶನದ ಧಾರಾವಾಹಿಗಳಲ್ಲಿ ತಲ್ಲೀನರಾಗಿ ಸೀಮಿತ ಜಗತ್ತಿನೊಳಗೆ ಬಾಳುವ ಸಮೂಹಸನ್ನಿಯ ಮಹಿಳೆಯರು ಇರುವಂತೆಯೇ ಮುಗಿಲು ಮುಟ್ಟಿದ ದಿಟ್ಟೆಯರು ಮಹಿಳಾ ವೈಮಾನಿಕರು ಇರುವ ಕಾಲವೂ ಹೌದು ಬಾಹ್ಯಾಕಾಶಯಾನದಲ್ಲಿ ತೊಡಗಿರುವ ಸ್ತ್ರೀಯರು ಇರುವ ಯುಗವೂ ಹೌದು . ಹೀಗೆ ಎಷ್ಟೋ ವೃತ್ತಿಪರರು ಸಾಮಾಜಿಕ ಚಿಂತಕರು ತಮ್ಮ ತಮ್ಮ ಅನುಭವದ ಅಸ್ಮಿತೆಗಳ ಒರೆಗಲ್ಲಿಗೆ ವಿಚಾರದ ಚಿನ್ನವನ್ನು ಉಜ್ಜಿ ನೋಡುತ್ತಾ ಮಾಡಿರುವ ತೌಲನಿಕ ಅಧ್ಯಯನ ನಿಜಕ್ಕೂ ತುಂಬಾ ಮೌಲ್ಯಯುತವಾಗಿರುವಂತದ್ದು.
ಇಷ್ಟೆಲ್ಲಾ ನಲವತ್ತು ಪ್ರತಿಭಾನ್ವಿತ ಲೇಖಕಿಯರನ್ನು ಕಲೆಹಾಕಿ ಪ್ರಬಂಧಗಳನ್ನು ತಂದು ಸಂಕಲಿಸುವ ಈ ಮಹಾನ್ ಪ್ರಯತ್ನ ಮಾಡಿರುವ ಶ್ರೀಮತಿ ವಿಜಯಾ ಶಂಕರ ಅವರು ನಿಜಕ್ಕೂ ಅಭಿನಂದನಾರ್ಹರು. ಅವರೇ ಸಂಪಾದಕೀಯದಲ್ಲಿ ಈ ಪುಸ್ತಕದ ಬಗ್ಗೆ ಹೇಳಿರುವ ಮಾತುಗಳನ್ನು ನೋಡಿ “ಸ್ತ್ರೀವಾದಿ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರ ಸಮಸ್ಯೆಗಳ ವಿವಿಧ ಮಗ್ಗಲುಗಳನ್ನು ಸೈದ್ಧಾಂತಿಕ ಹಿನ್ನೆಲೆ ಬೆಂಬಲ ಸ್ತ್ರೀವಾದಿ ಚಿಂತನೆ ರಾಜಕಾರಣ ಕಲೆ ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಮಹಿಳೆಯರು ತಳೆದಿರುವ ನಿಲುವು ಗಳನ್ನು ವಾಸ್ತವಾಂಶಗಳನ್ನು ಪ್ರತಿಬಿಂಬಿಸುವ ಲೇಖನಗಳನ್ನು 1ಕಡೆ ಕ್ರೋಡೀಕರಿಸಿ ಸಂಕಲನದ ರೂಪದಲ್ಲಿ ತರುವ ಭಗೀರಥ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಈ ಕಾರ್ಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದಿನೆಯೇ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ನನ್ನನ್ನು ಕಾಡುತ್ತಿದೆ. ಆದರೆ ಹೆಣ್ಣುಮಕ್ಕಳು ಇರುವವರೆಗೆ ಸಮಸ್ಯೆಗಳು ಇದ್ದೇ ಇರುತ್ತದೆ .ಇದು ನಿರಂತರ. ಇವುಗಳಿಗೆ ಉತ್ತರವನ್ನು ಸತತವಾಗಿ ಕಂಡುಕೊಳ್ಳುತ್ತಲೇ ಇರಬೇಕಾಗುತ್ತದೆ . ಹೊಸ ರೀತಿಯ ಆಲೋಚನೆಗಳು ಚಿಂತನೆಗಳು ಹೆಣ್ಣುಮಕ್ಕಳಿಗೆ ದಾರಿದೀಪವಾಗಬಹುದು “.
ಖಂಡಿತ ನಿಜ! ಮನಸ್ಸಿನಲ್ಲಿ ಎಷ್ಟೋ ಬಾರಿ ಕೆಲವೊಂದು ಆಲೋಚನೆಗಳು ಹುಟ್ಟಿದರೂ ಅವುಗಳಿಗೆ ಸಮರ್ಪಕ ರೀತಿಯಲ್ಲಿ ಶಬ್ದ ರೂಪ ಕೊಡುವ ಶಕ್ತಿ ಇರುವುದಿಲ್ಲ ಅಥವಾ ನಮ್ಮ ಯೋಚನೆಗಳೇ ಜಾಳುಜಾಳಾಗಿದ್ದು ಒಂದೆಡೆ ಗಟ್ಟಿಯಾಗಿ ಸ್ಪಷ್ಟ ರೂಪು ನಿಲುವು ಪಡೆಯುವಲ್ಲಿ ಇಂತಹ ಲೇಖನಗಳ ಓದು ನಿಜಕ್ಕೂ ನೆರವಾಗುತ್ತದೆ .

ಇಂದಿನ ಮಹಿಳಾ ದಿನದ ಸಂದರ್ಭದಲ್ಲಿ ಈ ಪುಸ್ತಕದ ಪರಿಚಯ ಮಾಡಿ ಕೊಡಲೇಬೇಕೆಂಬ ತುಡಿತದಿಂದ ಈ ಸಣ್ಣ ಟ್ರೈಲರ್ ಅಷ್ಟೇ ಖಂಡಿತ ಎಲ್ಲರೂ ಓದಿ ಮನನ ಮಾಡಿಕೊಳ್ಳ ಬೇಕಾದಂತಹ ಪುಸ್ತಕ . ಅನೇಕ ಹೊಸ ಬರಹಗಾರರಿಗೆ ತಮ್ಮ ಬರಹಗಳನ್ನು ವ್ಯಕ್ತಪಡಿಸುವ ಹೊಸ ಆಯಾಮವನ್ನು ರೀತಿಯನ್ನು ಸಹ ಇಲ್ಲಿನ ಬರಹಗಳ ಶೈಲಿ ಪದ ಬಳಕೆ ವಿಷಯ ಸಂಗ್ರಹಣೆ ನಿರೂಪಣೆಗಳು ಖಂಡಿತ ದಾರಿದೀಪವಾಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ . ನಮ್ಮ ಮಹಿಳಾ ಚಳುವಳಿಗಳು ಹೇಗೆ ವಿಸ್ತೃತ ಗೊಳ್ಳಬೇಕು ಯಾವದಾರಿಯಲ್ಲಿ ಸಾಗಬೇಕು ಎನ್ನುವುದಕ್ಕೆ ಇದೊಂದು ಮಾರ್ಗಸೂಚಿಯಾಗಿಯೂ ಇದೆ . ಮುನ್ನುಡಿ ಬರೆದಂಥ ಪ್ರೊಫೆಸರ್ ಮಲೆಯೂರು ಗುರುಸ್ವಾಮಿ ಮೈಸೂರು ಅವರು ಹೇಳಿದಂತೆ “ಅನೇಕ ಲೇಖನಗಳು ಮರ್ಮಗಳನ್ನು ಒಂದೇ ಓದಿಗೆ ದಕ್ಕಿಸಿಕೊಳ್ಳಲು ಸಾಧ್ಯ ವಿಲ್ಲ ಮೇಲ್ನೋಟಕ್ಕೆ ಕೆಲವು ಕೇವಲ ಮಹಿಳಾವಾದಿಗಳ ಚಿಂತನೆಯ ಕ್ರಮದಂತೆ ಎಂದೆನಿಸಿದರೂ ಮರು ಓದು ನಮ್ಮನ್ನು ಗೆರೆಯ ಆಯಾಮಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಪಡೆದುಕೊಂಡಿರುತ್ತದೆ .”

ಇಲ್ಲಿಯದೇ ಲೇಖನವೊಂದರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಯಮನ್ ದೇಶದ ತವಕ್ಕುಲ್ ಕರ್ಮಾನ್ ಹೇಳಿದ ಮಾತುಗಳೊಂದಿಗೆ ಈ ಲೇಖನವನ್ನು ಮುಗಿಸುವೆ .
Women is the leader she can lead it is not only struggle for women but for human beings .

ಹೆಣ್ಣು ಕೇವಲ ಪುರುಷ ಪ್ರಧಾನ ಸಮಾಜದಿಂದ ಮಾತ್ರ ಬಿಡುಗಡೆಯನ್ನು ಬಯಸುತ್ತಿಲ್ಲ ಅದರಾಚೆಯೂ ಆಕೆ ಪುರುಷನನ್ನು ಒಳಗು ಮಾಡಿಕೊಂಡು ಎಲ್ಲರ ಶಾಂತಿಗಾಗಿ ಪರಿತಪಿಸುತ್ತಿದ್ದಾಳೆ ಎನ್ನುವುದು.

ಒಂದೇ ಪುಸ್ತಕದಲ್ಲಿ ವಿಭಿನ್ನ ಲೇಖಕಿಯರ ವೈವಿಧ್ಯಮಯ ವಿಚಾರಧಾರೆಗಳನ್ನು ಅರಿಯುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂಪಾದಕಿ ಶ್ರೀಮತಿ ವಿಜಯಾ ಶಂಕರ್ ಅವರಿಗೆ ತುಂಬು ಹೃದಯದ
ಧನ್ಯವಾದಗಳು .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು


Leave a Reply

Back To Top